ಗಾದೆಗಳು ಮತ್ತು ಅದರ ಸಾರಾಂಶ-4

1.ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ
ಬಲಶಾಲಿಗಳು ಶ್ರೀಮಂತರ ಹುಡುಗಾಟ ದುರ್ಬಲರಿಗೆ, ಕೆಳವರ್ಗದವರಿಗೆ ಬಡವರಿಗೆ ಸಂಕಟವನ್ನು ಉಂಟುಮಾಡುತ್ತದೆ ಎಂಬ ಅರ್ಥವನ್ನು ಈ ಗಾದೆ ನೀಡುತ್ತದೆ. ಇಲ್ಲಿ ಬೆಕ್ಕು ಹಾಗೂ ಇಲಿ ಎಂಬ ಪ್ರಾಣಿಗಳ ಹೆಸರನ್ನು ಬಳಸಿದ್ದರೂ, ಇವುಗಳ ಹಾಗೆ ವರ್ತಿಸುವ ಮನುಷ್ಯರಿಗೆ ಅನ್ವಯಿಸುತ್ತದೆ. ಬೆಕ್ಕು ಇಲಿಯನ್ನು ಬೇಟೆಯಾಡಿದ ತಕ್ಷಣ ತಿನ್ನದೆ ಅದಕ್ಕೆ ಹಿಂಸೆ ಕೊಟ್ಟು ಚೆಲ್ಲಾಟವಾಡುತ್ತದೆ. ಅದೇ ರೀತಿಯಲ್ಲಿ ಕೆಲವು ಮನುಷ್ಯರಿಗೆ ಇದೆ ಬುದ್ದಿ ಇರುತ್ತದೆ. ಇವರು ಇತರರು ಕಷ್ಟಪಡುವುದನ್ನು ನೋಡಿ ಸಂತೋಷಪಡುತ್ತಾರೆ. ತಮಗೆ ಆಗದವರಿಗೆ ಏನಾದರೂ ಆಪತ್ತು ಸಂಭವಿಸಿದರೆ ಅದನ್ನು ಕಂಡು ಹಾಲು ಕುಡಿದಷ್ಟು ಸಂತೋಷವಾಗುತ್ತದೆ. ಹೀಗೆ ಅನೇಕರು ಇತರರಿಗೆ ಕಷ್ಟಕೊಟ್ಟು ಚೆಲ್ಲಾಟವಾಡುತ್ತಾರೆ.
2.ಹುಟ್ಟುವಾಗ ಅಣ್ಣತಮ್ಮಂದಿರು ಬೆಳೆಯುವಾಗ ದಾಯಾದಿಗಳು
ಈ ಗಾದೆಯಲ್ಲಿ ಅಣ್ಣ - ತಮ್ಮಂದಿರು ಬೆಳೆಯುವಾಗ ಹೇಗೆ ಬದಲಾಗುತ್ತಾರೆ ಎಂಬ ವಿಷಯವನ್ನು ತಿಳಿಸುತ್ತದೆ. ಮದುವೆಯಾಗುವುದಕ್ಕೆ ಮಂಚೆ ಅಣ್ಣ - ತಮ್ಮಂದಿರು ಅನ್ಯೋನ್ಯವಾಗಿಯೇ ಇರುತ್ತಾರೆ. ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುತ್ತಿರುತ್ತಾರೆ. ಆದರೆ ಯಾವಾಗ ಅಣ್ಣ - ತಮ್ಮಂದಿರು ಮದವೆಯಾಗುತ್ತಾರೋ, ಆಗ ಅಣ್ಣ - ತಮ್ಮಂದಿರಲ್ಲಿ ವಿರಸ ಪ್ರಾರಂಭವಾಗುತ್ತದೆ. ಅವರಲ್ಲಿ ಮನಸ್ತಾಪಗಳಾಗಿ, ಜಗಳಗಳೂ ನಡೆಯುವುದುಂಟು. ಹಾಗಾಗಿ ಮದುವೆಯಾದ ನಂತರ ಅಣ್ಣ-ತಮ್ಮಂದಿರು ಬೇರೆ ಬೇರೆ ಮನೆಗಳಲ್ಲಿ ಸಂಸಾರ ಹೂಡುವುದು ಸರ್ವೇ ಸಾಮಾನ್ಯವಾಗಿದೆ. 'ನಾಲ್ಕು ಕ್ರಾಪುಗಳು ಒಟ್ಟಿಗೆ ಇರಬಹುದು, ಎರಡು ಜಡೆಗಳು ಒಟ್ಟಿಗೆ ಇರಲಾರವು' ಎಂಬ ಮತ್ತೊಂದು ಗಾದೆ ಹುಟ್ಟಿಕೊಂಡಿದೆ. ಚಿಕ್ಕಪ್ಪ - ದೊಡ್ಡಪ್ಪಂದಿರ ಮಕ್ಕಳನ್ನು ದಾಯಾದಿಗಳು ಅನ್ನುತ್ತೇವೆ. ಬೆಳೆಯುತ್ತಾ ಹೋದಂತೆ ಒಂದೇ ತಾಯಿಯ ಮಕ್ಕಳಲ್ಲೂ ಈ ಗುಣ ಬರುತ್ತದೆಂಬುದು ಈ ಗಾದೆಯ ಸಾರಾಂಶ.
3.ಹಾಸಿಗೆ ಇದ್ದಷ್ಟು ಕಾಲು ಚಾಚು
ಮೇಲಿನ ಗಾದೆ ಮಾತು ಜೀವನದ ಇತಿಮಿತಿಯನ್ನು ಸೂಚಿಸುತ್ತದೆ. ಹಾಸಿಗೆಯ ಅಳತೆಗೆ ತಕ್ಕಂತೆ ಕಾಲು ಚಾಚಿ ಮಲಗಬೇಕು. ಇಲ್ಲವಾದರೆ ಕಾಲು ಹಾಸಿಗೆಯಿಂದ ಆಚೆ ಬಂದು ನೆಲ ಮುಟ್ಟಿ ಶೀತ ಬಾಧೆ ಬಂದೀತು . ಹಾಗಾಗಿ ಹಾಸಿಗೆ ಅಷ್ಟು ಉದ್ದವಿಲ್ಲದಿದ್ದರೆ ,ಮೊಟಕಾಗಿದ್ದರೆ ಕಾಲನ್ನು ಮಡಚಿಕೊಳ್ಳುತ್ತೇವೆ. ಹಾಗೆಯೇ ನಮ್ಮ ಮಿತಿಯನ್ನು ಅರಿತು ಬಾಳಬೇಕು .ಯಾವುದೇ ಕೆಲಸಕ್ಕೆ ಕೈ ಹಾಕಿದರೂ ನಮ್ಮ ಶಕ್ತಿ,ಸಾಮರ್ಥ್ಯ ,ಸೌಕರ್ಯಗಳನ್ನು ಗಮನಿಸಬೇಕು. ಅದಕ್ಕೆ ತಕ್ಕಂತೆ ಖರ್ಚು ಮಾಡಬೇಕು. ಸಾಲ ಮಾಡಿ ತುಪ್ಪ ತಿನ್ನುವ ಜಾಯಮಾನ ನಮ್ಮದಾಗಬಾರದು. ನಮ್ಮ ಆದಾಯಕ್ಕೆ ತಕ್ಕ ಹಾಗೆ ಖರ್ಚು ಮಾಡಬೇಕು. ಆದಾಯ ಕಡಿಮೆ ಖರ್ಚು ಅತಿಯಾದರೆ ಜೀವನದಲ್ಲಿ ನಾವೇ ಸಂಕಟಪಡಬೇಕಾಗುತ್ತದೆ. ದುಃಖ ,ಗೊಂದಲ ನಮ್ಮನ್ನು ಅವಲಂಬಿಸಿರುವವರಿಗೂ ಸಮಸ್ಯೆಗಳುಂಟಾಗುತ್ತವೆ. ಬುದ್ಧ ಹೇಳುವಂತೆ ಆಸೆಯೇ ದುಃಖಕ್ಕೆ ಮೂಲ; ಆಸೆಯ ನಾಶವೇ ಸಂತೋಷದ ಮೂಲವಾಗಿದೆ. ಆದ್ದರಿಂದ ಇರುವುದರಲ್ಲಿ ತೃಪ್ತಿಕರವಾದ ,ಆರೋಗ್ಯಕರವಾದ ಜೀವನವನ್ನು ನಡೆಸಬೇಕು.ಮಿತಿಯನ್ನು ಅರಿತು ಬಾಳು ಎಂಬುದು ಮೇಲಿನ ಗಾದೆ ಮಾತಿನ ಸಂದೇಶವಾಗಿದೆ.
ರಿಂದ,
ನಿರ್ವಾಹಕ

(ಒಗಟು ಗಾದೆಗಳ ಪುಟ)

No comments:

Post a Comment

ಗಾದೆಗಳು ಮತ್ತು ಅದರ ಸಾರಾಂಶ-11

1.ಹೆಣ್ಣು ಸಂಸಾರದ ಕಣ್ಣು ಈ ಗಾದೆಯಲ್ಲಿ ಸಂಸಾರದಲ್ಲಿ ಹೆಣ್ಣಿನ ಮಹತ್ವವನ್ನು ಹೇಳಿದೆ. ಹೆಣ್ಣಿಲ್ಲದ ಮೇಲೆ ಅದು ಸಂಸಾರವೇ ಅಲ್ಲ. ಮನುಷ್ಯನ ದೇಹಕ್ಕೆ ಕಣ್ಣು ಎಷ್ಟು ಮುಖ್...

">
">