ಗಾದೆಗಳು ಮತ್ತು ಅದರ ಸಾರಾಂಶ-2

1.ಮಾಡಿದ್ದುಣ್ಣೋ ಮಹರಾಯ
ಈ ಗಾದೆಯು ತಾನು ಮಾಡಿದ ಕರ್ಮಗಳ ಫಲವನ್ನು ತಾನೇ ಅನುಭವಿಸಬೇಕು. ಬೇರೆ ಯಾರೂ ಅದರ ಫಲಗಳನ್ನು ಅನುಭವಿಸಲಾರರು ಎಂಬುದನ್ನು ಹೇಳುತ್ತದೆ. ಒಳ್ಳೆಯ ಕರ್ಮಗಳನ್ನು ಮಾಡಿದವರಿಗೆ ಒಳ್ಳೆಯ ಫಲಗಳು, ಕೆಟ್ಟ ಕರ್ಮಗಳನ್ನು ಮಾಡಿದದವರಿಗೆ ಕೆಟ್ಟ ಫಲಗಳು ಉಂಟಾಗುವುದು ಖಚಿತ ಎಂಬುದನ್ನು ಈ ಗಾದೆ ತಿಳಿಸಿ ಹೇಳುತ್ತದೆ. ಆದ್ದರಿಂದ ಜನರು ಯಾವುದೇ ಕೆಲಸ ಮಾಡಬೇಕಾದರೂ ಇದರ ಪರಿಣಾಮವೇನಾಗುತ್ತದೆ ಎಂದು ಯೋಚನೆ ಮಾಡಬೇಕು. ಮಾಡಿದ ಮೇಲೆ ಪಶ್ಚಾತ್ತಾಪ ಪಟ್ಟರೆ ಏನೂ ಪ್ರಯೋಜನವಿಲ್ಲ. ತಾನು ಮಾಡಿದ ಕರ್ಮಗಳ ಫಲವನ್ನು ತಾನು ಅನುಭವಿಸಿಯೇ ತೀರಬೇಕು. ಇದರಿಂದ ಯಾರೂ ತಪ್ಪಿಸಿಕೊಳ್ಳಲಾರರು ಎಂಬುದನ್ನು ಈ ಗಾದೆ ಒತ್ತಿ ಹೇಳುತ್ತದೆ.
2.ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ
ಈ ಗಾದೆಯು ದುರದೃಷ್ಟಶಾಲಿಗಳನ್ನು ಕುರಿತ ಗಾದೆಯಾಗಿದೆ. ಮಹಾಭಾರತದಲ್ಲಿ ಕುಂತಿಯ ಮಕ್ಕಳಾದ ಪಾಂಡವರು ಕಡೆಯವರೆಗೂ ಕಷ್ಟವನ್ನೇ ಅನುಭವಿಸುತ್ತಾರೆ. ಕಡೆಗೆ ರಾಜ್ಯ ಸಿಕ್ಕಿದ ಮೇಲೂ ಅವರು ಸುಖವಾಗಿದ್ದರೆಂದು ಹೇಳುವುದಕ್ಕಾಗುವುದಿಲ್ಲ. ಕಡೆಗೆ ಅವರು ಸ್ವರ್ಗರೋಹಣ ಪರ್ವದಲ್ಲಿ ರಾಜಕಾರಣದಿಂದ ಬೇಸತ್ತು ಸ್ವರ್ಗಾಭಿಮುಖವಾಗಿ ಹೊರಟು ಹೋಗುತ್ತಾರೆ. ಆದರೆ ಅನ್ಯಾಯಗಳನ್ನು ಮಾಡುತ್ತ ರಾಜ್ಯಭಾರ ಮಾಡುತ್ತಿದ್ದ ಕೌರವರಾದರೋ ಯುದ್ಧದಲ್ಲಿ ಹತರಾದರೂ ಕೂಡ ಸಾಯುವವರೆಗೂ ಸುಖವಾಗಿಯೇ ಬಾಳಿದರು. ಈ ಅರ್ಥದಲ್ಲಿ ಈ ಗಾದೆ ಪೌರಾಣಿಕ ಸನ್ನಿವೇಶವೊಂದನ್ನು ಲೌಕಿಕಕ್ಕೆ ಅನ್ವಯಿಸಿ ಸೊಗಸಾಗಿ ಹೇಳಲಾಗಿದೆ.
3.ಪಾಪಿ ಸಮುದ್ರ ಹೊಕ್ಕರೂ ಮೊಳಕಾಲುದ್ದ ನೀರು
ಈ ಗಾದೆ ಒಬ್ಬ ವ್ಯಕ್ತಿಯ ದುರದೃಷ್ಟವನ್ನು ಕುರಿತು ಹೇಳುತ್ತದೆ. ಒಬ್ಬ ವ್ಯಕ್ತಿ ಏನೇ ಕೆಲಸ ಕೈಗೊಂಡರೂ ಯಶಸ್ವಿಯಾಗದೆ ಪದೇ ಪದೇ ಸೋಲನ್ನನುಭವಿಸುತ್ತಾನೆ. ಅಂಥ ಸಂದರ್ಭದಲ್ಲಿ ಈ ಗಾದೆಯನ್ನು ಬಳಸುತ್ತಾರೆ. ಸಮುದ್ರ ಆಳವಾಗಿರುತ್ತದೆ. ಆದರೆ ದುರದೃಷ್ಟವಂತ ಅಲ್ಲಿಯೂ ಮುಳುಗುವುದಿಲ್ಲ. ಅಂದರೆ ಅವನಿಗೆ ಎಲ್ಲಿ ಹೋದರೂ ಸೋಲೇ ಕಾದಿರುತ್ತದೆ ಎನ್ನುವ ಅರ್ಥ. ಪಾಪಿ, ಸಮುದ್ರ, ಮೊಳಕಾಲು, ನೀರು ಈ ಪದಗಳ ಜೋಡಣೆ ಹಳ್ಳಿಗನ ಬುದ್ಧಿವಂತಿಕೆಗೆ ನಿದರ್ಶನ.
ರಿಂದ,
ನಿರ್ವಾಹಕ

(ಒಗಟು ಗಾದೆಗಳ ಪುಟ)

1 comment:

Post a Comment

ಗಾದೆಗಳು ಮತ್ತು ಅದರ ಸಾರಾಂಶ-11

1.ಹೆಣ್ಣು ಸಂಸಾರದ ಕಣ್ಣು ಈ ಗಾದೆಯಲ್ಲಿ ಸಂಸಾರದಲ್ಲಿ ಹೆಣ್ಣಿನ ಮಹತ್ವವನ್ನು ಹೇಳಿದೆ. ಹೆಣ್ಣಿಲ್ಲದ ಮೇಲೆ ಅದು ಸಂಸಾರವೇ ಅಲ್ಲ. ಮನುಷ್ಯನ ದೇಹಕ್ಕೆ ಕಣ್ಣು ಎಷ್ಟು ಮುಖ್...

">
">