ಗಾದೆಗಳು ಮತ್ತು ಅದರ ಸಾರಾಂಶ-11

1.ಹೆಣ್ಣು ಸಂಸಾರದ ಕಣ್ಣು
ಈ ಗಾದೆಯಲ್ಲಿ ಸಂಸಾರದಲ್ಲಿ ಹೆಣ್ಣಿನ ಮಹತ್ವವನ್ನು ಹೇಳಿದೆ. ಹೆಣ್ಣಿಲ್ಲದ ಮೇಲೆ ಅದು ಸಂಸಾರವೇ ಅಲ್ಲ. ಮನುಷ್ಯನ ದೇಹಕ್ಕೆ ಕಣ್ಣು ಎಷ್ಟು ಮುಖ್ಯವೋ, ಸಂಸಾರಕ್ಕೆ ಹೆಣ್ಣು ಅಷ್ಟೇ ಮುಖ್ಯ ಎಂಬುದು ಈ ಗಾದೆಯ ಹೇಳಿಕೆ.
2.ಭರಣಿ ಮಳೆಗೆ ಬಿತ್ತಿದರೆ ಧರಣಿಯಲ್ಲಿ ಧಾನ್ಯ
ಭರಣಿ ಮಳೆ ಬಂದಾಗ ಬಿತ್ತನೆ ಮಾಡಿದರೆ ಫಸಲು ಖಂಡಿತ ಬರುವುದು ಎಂಬುದು ರೈತರ ನಂಬಿಕೆ. ಅಂದರೆ ಇಲ್ಲಿ ರೈತನು ಭರಣಿ ಮಳೆ ಬರುವುದನ್ನೇ ಕಾಯುತ್ತ, ಬಂದ ಕೂಡಲೇ ಮುಂಗಾರು ಮಳೆಗೆ ಬೀಜ ಬಿತ್ತಲು ಸಿದ್ಧತೆ ಮಾಡಿಕೊಂಡಿರಬೇಕಾಗುತ್ತದೆ. ಈ ಗಾದೆ ಅವನಿಗೆ ಮುನ್ನೆಚ್ಚರಿಕೆಯನ್ನು ಕೊಟ್ಟಿರುತ್ತದೆ.
3.ಆರಿದ್ರೆ ಮಳೆ ಗುಡುಗಿದರೆ ಆರು ಮಳೆ ಬರುವುದಿಲ್ಲ
ಈ ಗಾದೆ ರೈತನ ನಂಬಿಕೆಯಾಗಿದೆ. ಮಳೆ ಗುಡುಗಿದರೆ ರೈತ ಕಂಗಾಲಾಗುತ್ತಾನೆ. ಬರಗಾಲ ಬರುತ್ತದೇನೋ ಎಂದು ಗಾಬರಿಯಾಗುತ್ತಾನೆ. ಈ ಮಳೆ ಗುಡಗದಿರಲಿ ಎಂದು ಹಾರೈಸುತ್ತಾನೆ. ಏಕೆಂದರೆ ಮಳೆಯನ್ನೇ ಅವಲಂಬಿಸಿರುವರ ರೈತರಿಗೆ ಮಳೆ ಮತ್ತು ಮಳೆಯಿಂದ ಬೆಳೆಯುವ ಧಾನ್ಯಗಳೇ ಜೀವನಾಧಾರಗಳಾಗಿವೆ.
ರಿಂದ,
ನಿರ್ವಾಹಕ

(ಒಗಟು ಗಾದೆಗಳ ಪುಟ)

ಗಾದೆಗಳು ಮತ್ತು ಅದರ ಸಾರಾಂಶ-10

1.ಗಂಡಹೆಂಡಿರ ಜಗಳ ಉಂಡು ಮಲಗುವ ತನಕ
ಈ ಗಾದೆಯಲ್ಲಿ ಗಂಡು ಹೆಣ್ಣಿನ ಸಂಬಂಧ ಬಿಡಿಸಲಾಗದ ಬಂಧ ಎಂಬುದನ್ನು ಹೇಳಿದೆ. ಗಂಡ - ಹೆಂಡತಿ ಎಷ್ಟೇ ಜಗಳವಾಡಿದರೂ ಕಡೆಯಲ್ಲಿ ಪರಸ್ಪರ ಹೊಂದಿಕೊಂಡು ಹೋಗಬೇಕು. ಗಂಡ - ಹೆಂಡಿರ ಜಗಳ ತಾತ್ಕಾಲಿಕ ಸ್ವರೂಪದಾಗಿರಬೇಕು. ಅವರಿಬ್ಬರೂ ಒಟ್ಟಿಗೆ ಬಾಳುವುದು ಅನಿವಾರ್ಯ. ಅವರು ವಿವಾಹವೆಂಬ ಪವಿತ್ರ ಬಂಧನದಲ್ಲಿ ಬಂಧಿತರಾಗಿದ್ದಾರೆ. ಹಾಗಾಗಿಯೇ ಅವರು ಎಷ್ಟೇ ಜಗಳವಾಡಿದರೂ ಕಡೆಯಲ್ಲಿ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಬಾಳಬೇಕು ಎಂಬುದು ಈ ಗಾದೆಯ ಆಶಯ. ಇಲ್ಲಿ ಗಂಡ ಹೆಂಡತಿ ನಡುವೆ ನಂಬಿಕೆ ಇರಬೇಕಾದ್ದು ಬಹಳ ಮುಖ್ಯವಾದದ್ದು. ನಂಬಿಕೆ ಇಲ್ಲದ ಮೇಲೆ ಆ ಸಂಸಾರಕ್ಕೆ ಅರ್ಥವೇ ಇರುವುದಿಲ್ಲ.
2.ಹೆತ್ತವರಿಗೆ ಹೆಗ್ಗಣ ಮುದ್ದು ಕೂಡಿದವರಿಗೆ ಕೋಡಗ ಮುದ್ದು
ಈ ಗಾದೆಯಲ್ಲಿ ಪ್ರೀತಿಯ ಮಹತ್ವವನ್ನು ಹೇಳಿದೆ. ಪ್ರೀತಿಸುವ ಗಂಡು - ಹೆಂಡಿರ ಮಧ್ಯೆ ರೂಪ ಅಡ್ಡ ಬರುವುದಿಲ್ಲ. ಹೆಂಡತಿ ಕುರೂಪಿಯಾಗಿದ್ದರೂ ಸಹ ಪ್ರೀತಿಸುವ ಗಂಡನ ಪಾಲಿಗೆ ಅವಳು ರತಿಯೇ ಸೈ. ಬೇರೆಯವರ ದೃಷ್ಟಿಯಲ್ಲಿ ಅವಳು ಕೋಡಗದಂತೆ ಕಾಣುತ್ತಿದ್ದರೂ ಪ್ರೀತಿಸುವ ಗಂಡನ ಪಾಲಿಗೆ ಅವಳು ಸುರ ಸುಂದರಿಯಾಗಿಯೇ ಕಾಣುತ್ತಾಳೆ. ಪ್ರೀತಿಯ ಮಹತ್ವವೇ ಅಂಥದು. ಇದೇ ರೀತಿ ಹೆತ್ತವರಿಗೆ ತಮ್ಮ ಮಕ್ಕಳು ಕುರೂಪಿಗಳಾಗಿದ್ದರೂ ಅವರಿಗೆ ಸುಂದರವಾಗಿಯೇ ಕಾಣುತ್ತಿರುತ್ತಾರೆ. ಕಾರಣ ತಮ್ಮ ಮಕ್ಕಳ ಮೇಲೆ ಪಾಲಕರಿಗೆ ಇರುವ ಅತಿಯಾದ ಮಮತೆ ಮತ್ತು ಪ್ರೀತಿ.
3.ಶಿವರಾತ್ರಿಗೆ ಸೀಳುಗಾಯಿ: ಯುಗಾದಿಗೆ ಹುಳಿಗಾಯಿ
ಈ ಗಾದೆಯಲ್ಲಿ ಮಾವಿನ ಮರ ಫಸಲು ಬಿಡುವ ರೀತಿಯನ್ನು ತಿಳಿಸಿದೆ. ಶಿವರಾತ್ರಿ ಹಬ್ಬದ ಹೊತ್ತಿಗೆ ಮಾವಿನಕಾಯಿ ಸೀಳುಗಾಯಿ ಅಂದರೆ ಹೀಚುಗಾಯಿಗಳಾಗಿರುತ್ತವೆ. ಯುಗಾದಿ ಹಬ್ಬದ ಸಮಯಕ್ಕೆ ಹೂವಿನ ಕಾಯಿ ಹುಳಿಗಾಯಿ ಎಂದರೆ ಹುಳಿ ತುಂಬಿದ ಕಾಯಿಗಳಾಗಿರುತ್ತವೆ. ಎಂಬುದು ಇದರ ಅರ್ಥ.
ರಿಂದ,
ನಿರ್ವಾಹಕ

(ಒಗಟು ಗಾದೆಗಳ ಪುಟ)

ಗಾದೆಗಳು ಮತ್ತು ಅದರ ಸಾರಾಂಶ-9

1.ಕಾಸಿದ್ರೆ ಕೈಲಾಸ
ಈ ಗಾದೆಯು ಹಣದ ಮಹತ್ವವನ್ನು ಹೇಳುತ್ತದೆ. ಹಣವಿದ್ದರೆ ತನಗೆ ಬೇಕಾದುದೆಲ್ಲವನ್ನು ಪಡೆದುಕೊಂಡು ಸುಖವಾಗಿರಬಹುದೆಂಬುದೇ ಈ ಗಾದೆಯ ಆಶಯ. ಹಣವಿಲ್ಲದಿದ್ದರೆ ಜೀವನವೇ ಕಷ್ಟವಾಗುತ್ತದೆ. ಆದ್ದರಿಂದಲೇ ಕಷ್ಟಪಟ್ಟು ಹಣ ಸಂಪಾದನೆ ಮಾಡಬೇಕು. ಇದರಿಂದ ಸೋಮಿರಿಗೆ ಬದುಕೇ ಭಾರ ಎಂಬ ಗಾದೆ ಬಳಕೆಗೆ ಬಂದಿದೆ.
2.ಒಲಿದರೆ ನಾರಿ ಮುನಿದರೆ ಮಾರಿ
ಗಂಡನಾದವನು ಹೆಂಡತಿಯನ್ನು ಒಲಿಸಿಕೊಂಡು ಸಂಸಾರ ಮಾಡಿದರೆ ಆ ಮನೆ ಸ್ವರ್ಗಸಮಾನವಾಗಿರುತ್ತದೆ. ಹಾಗಲ್ಲದೆ ಹೆಣ್ಣನ್ನು ಪದೇ ಪದೇ ಹೀಯಾಳಿಸುತ್ತಾ ಅವಳನ್ನು ಸಿಟ್ಟಿಗೆಬ್ಬಿಸಿದರೆ, ಆ ಮನೆ ನರಕವಾಗುತ್ತದೆ. ಅಂದರೆ ಗಂಡ-ಹೆಂಡಿರ ಮಧ್ಯೆ ಪ್ರೀತಿ ಇರಬೇಕಾದ್ದು ಮುಖ್ಯ ಎಂಬುದು ಈ ಗಾದೆಯ ಆಶಯ. ಹಾಗಿಲ್ಲದಿದ್ದರೆ ಹೆಂಡತಿಗೆ ಸಿಟ್ಟು ಬಂದರೆ ಅವಳು ಮಾರಿಯ ಅವತಾರ ತಾಳಿ ಇಡೀ ಸಂಸಾರವನ್ನೇ ನಾಶ ಮಾಡುತ್ತಾಳೆ ಎನ್ನುವುದು ಈ ಗಾದೆಯ ಅರ್ಥ.
3.ಅತ್ತೆಗೊಂದು ಕಾಲ ಸೊಸೆಗೊಂದು ಕಾಲ
ಅತ್ತೆಯು ತಾನು ಪ್ರಬಲಳಾಗಿರುವವರೆಗೂ ಸೊಸೆಯನ್ನು ತನ್ನ ಅಂಕೆಯಲ್ಲಿ ಇಟ್ಟುಕೊಂಡಿರುತ್ತಾಳೆ. ಆಗ ಸೊಸೆ ಅತ್ತೆ ಹೇಳಿದ ಹಾಗೆ ಕೇಳಿಕೊಂಡು ಇರುತ್ತಾಳೆ. ಆದರೆ ವಯಸ್ಸಿನ ಕಾರಣದಿಂದ ಅತ್ತೆ ದುರ್ಬಲಳಾದಾಗ ಸೊಸೆ ಅತ್ತೆಯನ್ನು ಮೂಲೆಗೆ ತಳ್ಳಿ ತಾನು ಅಧಿಕಾರ ವಹಿಸಿಕೊಳ್ಳುತ್ತಾಳೆ. ಆಗ ಅತ್ತೆ ಸೊಸೆ ಹೇಳಿದ ಹಾಗೆ ಕೇಳಿಕೊಂಡಿರಬೇಕಾಗುತ್ತದೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಎಲ್ಲರಿಗೂ ಒಂದೊಂದು ಕಾಲ ಬರುತ್ತದೆ ಎನ್ನುವ ಅರ್ಥದಲ್ಲಿ ಈ ಗಾದೆ ಬಳಸುತ್ತಾರೆ.
ರಿಂದ,
ನಿರ್ವಾಹಕ

(ಒಗಟು ಗಾದೆಗಳ ಪುಟ)

ಗಾದೆಗಳು ಮತ್ತು ಅದರ ಸಾರಾಂಶ-8

1.ಎಮ್ಮೆ ಬೆಣ್ಣೆ ಎಮ್ಮೆ ಕಣ್ಣಿಗೆ ಸಾಲುವುದಿಲ್ಲ
ಅಲ್ಪ ಆದಾಯ ಕುರಿತ ಗಾದೆ ಇದು. ದುಡಿಯುವ ಒಬ್ಬ ಗಂಡಸಿನ ವರಮಾನ ಅವನ ಸ್ವಂತ ಖರ್ಚಿಗೆ ಸಾಲುವುದಿಲ್ಲ. ಅವನು ಮನೆ ಖರ್ಚಿಗೆ ಹಣವನ್ನೇ ಕೊಡುವುದಿಲ್ಲ. ಅವನ ದುಡೀಮೆ ಅವನಿಗೆ ಸಾಲದಿರುವಾಗ ಹೆಂಡತಿ ಮಕ್ಕಳನ್ನು ಹೇಗೆ ಸಾಕುತ್ತಾನೆ? ಇಂಥ ಸಂದರ್ಭದಲ್ಲಿ ಈ ಗಾದೆ ಬಳಕೆಗೆ ಬಂದಿದೆ.
2.ಮನೆಗೆ ಮಾರಿ ಊರಿಗೆ ಉಪಕಾರಿ
ವಿವೇಕ ಇಲ್ಲದವನ ಕುರಿತ ಗಾದೆ ಇದು. ಒಬ್ಬನು ಊರಿನ ಜನರಿಗೆಲ್ಲ ಸಹಾಯ ಮಾಡುತ್ತಿರುತ್ತಾನೆ. ಆದರೆ ತನ್ನ ಮನೆಯವರಿಗಾಗಿ ಏನೂ ದುಡಿಯುವುದಿಲ್ಲ. ಮೊದಲು ತನ್ನ ಮನೆಯ ಯೋಗಕ್ಷೇಮ ನೋಡಿಕೊಂಡು ನಂತರ ಊರಿನವರ ಯೋಗಕ್ಷೇಮ ನೋಡಿಕೊಳ್ಳಬೇಕು ಎಂಬುದು ಈ ಗಾದೆಯ ಆಶಯ.
3.ಸಮುದ್ರಕ್ಕೆ ನೀರು ಸುರಿದ ಹಾಗೆ
ಸಮುದ್ರಕ್ಕೆ ಎಷ್ಟೇ ನೀರು ಸುರಿದರೂ ಅದರ ಮಟ್ಟ ಒಂದು ಅಗಲವೂ ಜಾಸ್ತಿಯಾಗುವುದಿಲ್ಲ. ಅಂದರೆ ವ್ಯರ್ಥ ಶ್ರಮ. ಯಾವುದೇ ಒಂದು ಕೆಲಸ ನಿರರ್ಥಕವೆಂದು ತಿಳಿಸುವಾಗ ಈ ಗಾದೆ ಬಳಸುತ್ತಾರೆ.
4.ಜೀನನ ಒಡವೆ ಜಾಣ ತಿಂದ
ಈ ಗಾದೆಯಲ್ಲಿ ಜಿಪುಣನಾದ ಒಬ್ಬ ವ್ಯಕ್ತಿ ತನ್ನ ಜೀವಮಾನವಿಡೀ ದುಡಿದು ದುಡಿದು ಹಣ ಕೂಡಿಡುತ್ತಾನೆ. ಆದರೆ ತನ್ನ ಸ್ವಂತ ಸುಖಕ್ಕಾಗಿ ಸ್ವಲ್ಪವೂ ಖರ್ಚು ಮಾಡುವುದಿಲ್ಲ. ಇಂಥವರ ಹಣವನ್ನು ಜಾಣರಾದ ವ್ಯಕ್ತಿಗಳು ಉಪಯೋಗಿಸಿಕೊಂಡು ಸುಖ ಪಡುತ್ತಾರೆ. ಇಂಥ ಜಿಪುಣರನ್ನು ಕುರಿತು ಈ ಗಾದೆ ಸೃಷ್ಟಿಯಾಗಿದೆ. ಅಂದರೆ ಮನುಷ್ಯ ದುಂದುವೆಚ್ಚ ಇದರ ಅರ್ಥವಲ್ಲ. ತಾನು ದುಡಿದ ಹಣದಲ್ಲಿ ತಾನು ಸುಖವಾಗಿದ್ದು ತನ್ನ ಮಕ್ಕಳು ಮರಿಗಳಿಗೂ ಸಾಕಷ್ಟು ಉಳಿಸಿ ಹೋಗಬೇಕು ಎಂಬುದು ಈ ಗಾದೆಯ ಆಶಯ.
ರಿಂದ,
ನಿರ್ವಾಹಕ

(ಒಗಟು ಗಾದೆಗಳ ಪುಟ)

ಗಾದೆಗಳು ಮತ್ತು ಅದರ ಸಾರಾಂಶ-7

1.ಉಂಡು ಹೋದ ಕೊಂಡು ಹೋದ
ಸಹಾಯ ಮಾಡಿದವನಿಗೆ ನಷ್ಟ ಮಾಡುವವನನ್ನು ಕುರಿತ ಗಾದೆ ಇದು. ಇಲ್ಲಿ ಒಬ್ಬ ವ್ಯಕ್ತಿಯನ್ನು ಊಟಕ್ಕೆ ಕರೆದರೆ, ಅವನು ಊಟಮಾಡಿ ಗಂಭೀರವಾಗಿ ಮನೆಗೆ ಹೋಗಬೇಕು ತಾನೆ? ಆದರೆ ಅವನು ಹಾಗೆ ಮಾಡದೆ, ಜೊತೆಗೆ ಆ ಮನೆಯ ವಸ್ತುಗಳನ್ನು ಕದ್ದು ತೆಗೆದುಕೊಂಡು ಹೋಗುತ್ತಾನೆ. ಅಂದರೆ ಸಹಾಯ ಪಡೆದ ವ್ಯಕ್ತಿಯೊಬ್ಬ ಸಹಾಯ ಮಾಡಿದ ವ್ಯಕ್ತಿಗೆ ಇನ್ನೂ ಹೆಚ್ಚಿನ ಕಷ್ಟ ಉಂಟುಮಾಡುತ್ತಾನೆ. ಅಂಥ ಸಂದರ್ಭದಲ್ಲಿ ಈ ಗಾದೆ ಬಳಕೆಗೆ ಬಂದಿದೆ.
2.ಹಾಗಲಕಾಯಿಗೆ ಬೇಲಿ ಸಾಕ್ಷಿ
ಕಳ್ಳನು ಕಳ್ಳನ ಪರ ಸಾಕ್ಷಿ ಹೇಳುವುದರ ಕುರಿತ ಗಾದೆ ಇದು. ಹಾಗಲು ಬಳ್ಳಿ ಬೇಲಿಯ ಮೇಲೆ ಬೆಳೆದು ಹಬ್ಬಿ ಹಾಗಲು ಕಾಯಿಗಳನ್ನು ಬಿಟ್ಟಿರುತ್ತದೆ. ಅದು ಯಾವಾಗಲೂ ಬೇಲಿಯ ಆಶ್ರಯದಲ್ಲಿ ಇರುತ್ತದೆ. ಹಾಗಾಗಿ ಅದು ಸಾಕ್ಷಿಗಾಗಿ ಬೇಲಿಯನ್ನೇ ತೋರಿಸುತ್ತದೆ. ಏಕೆಂದರೆ ಬೇಲಿ ಯಾವತ್ತೂ ಹಾಗಲ ಕಾಯಿಯ ಪರವಾಗಿಯೇ ಸಾಕ್ಷಿ ಹೇಳುತ್ತದೆ. ಅದೇ ರೀತಿ ಮನುಷ್ಯನು ತನಗೆ ಬೇಕಾದವರಿಂದಲೇ ಸಾಕ್ಷಿ ಹೇಳಿಸುತ್ತಾನೆ. ಅಲ್ಲಿಗೆ ಸಾಕ್ಷಿ ಹೇಳುವವನು ತನ್ನಂಥವನೇ ಆಗಿರುತ್ತಾನೆ. ಕಳ್ಳನು ಕಳ್ಳನ ಪರ ಸಾಕ್ಷಿ ಹೇಳಿದಂತೆ. ಇಂಥ ಸಂದರ್ಭದಲ್ಲಿ ಈ ಗಾದೆ ಬಳಕೆಯಾಗಿದೆ.
3.ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು
ಅವಶ್ಯಕತೆ ಇಲ್ಲದ ವಸ್ತುಗಳಗೆ ಪ್ರಾಮುಖ್ಯತೆ ನೀಡುವ ಕುರಿತ ಗಾದೆ ಇದು. ಇದರ ಅರ್ಥವು ಸರಳವಾಗಿದೆ. ಅವಶ್ಯಕತೆ ಇರುವ ವಸ್ತುಗಳಿಗಿಂತ ಅವಶ್ಯಕತೆ ಇಲ್ಲದ ವಸ್ತುಗಳಿಗೆ ಕೆಲವರು ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ.
ರಿಂದ,
ನಿರ್ವಾಹಕ

(ಒಗಟು ಗಾದೆಗಳ ಪುಟ)

ಗಾದೆಗಳು ಮತ್ತು ಅದರ ಸಾರಾಂಶ-6

1.ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ
ಬೆಟ್ಟವನ್ನು ದೂರದಿಂದ ನೋಡಿದಾಗ ಅಲ್ಲಿರುವ ಕಲ್ಲು ಮುಳ್ಳುಗಳಾಗಲೀ ಏರು ತಗ್ಗುಗಳಾಗಲೀ ಓರೆ ಕೋರೆಗಳಾಗಲೀ ಯಾವುದೂ ನಮ್ಮ ಗಮನಕ್ಕೆ ಬರಲಾರದು .ದೂರದಿಂದ ಕಾಣುವ ಅದರ ಸೌಂದರ್ಯ ಮಾತ್ರ ನಮ್ಮ ಗಮನವನ್ನು ಸೆಳೆಯುತ್ತದೆ. ದೂರದಿಂದ ವರ್ಣರಂಜಿತವಾಗಿ ,ನುಣುಪಾಗಿ ,ಆಕರ್ಷಕವಾಗಿ ಕಾಣುವ ಬೆಟ್ಟವು ತನ್ನೊಳಗೆ ಕಲ್ಲು ಮುಳ್ಳುಗಳನ್ನು ,ಬಂಡಗಳನ್ನು ಹೊಂದಿರುತ್ತದೆ. ಬೆಟ್ಟದ ದೂರದ ಸೌಂದರ್ಯಕ್ಕೆ ಮರುಳಾಗಿ ಹತ್ತಿರ ಹೋಗಿ ನೋಡಿದಾಗ ಅಲ್ಲಿರುವ ಬೆಟ್ಟದ ನಿಜವಾದ ಚಿತ್ರಣವು ನಮ್ಮಲ್ಲಿ ನಿರಾಸೆಯನ್ನು , ಅಲ್ಲಿನ ಕಲ್ಲುಮುಳ್ಳುಗಳಲ್ಲಿ ನಡೆದಾಡುವಾ ಗ ಆಗುವ ಸಮಸ್ಯೆಯನ್ನು, ಏರು ತಗ್ಗುಗಳು ಎದುರಾದಾಗ ನಡೆದಾಡಬೇಕಾದ ಎಚ್ಚರಿಕೆಯನ್ನು ಸೂಚಿಸಿ ದೂರದಿಂದ ನೋಡಿ ತೀರ್ಮಾನಿಸಿದುದರ ಬಗ್ಗೆ ನಮಗೇ ನಾಚಿಕೆಯನ್ನು ಮೂಡಿಸಬಹುದು.ಅಂತೆಯೇ ಜೀವನದಲ್ಲಿ ನಮಗೆ ಬೇರೆ ಬೇರೆ ಮನೋಭಾವದ ಜನರು ಪರಿಚಿತರಾಗಬಹುದು . ಅವರ ಬಾಹ್ಯವಾದ ಸೌಂದರ್ಯಕ್ಕೆ ಮರುಳಾಗಿ ಗೆಳೆತನ ಮಾಡಬಾರದು ಅಥವಾ ಹೊರನೋಟದಿಂದ ಮಾತ್ರವೇ ವ್ಯಕ್ತಿಯನ್ನು ಅಳೆಯಲಾಗದು . ಅವರೊಂದಿಗಿನ ಒಡನಾಟದಿಂದ ಹಲವು ದಿನಗಳ ಪರಿಚಯಾತ್ಮಕ ಅಧ್ಯಯನದಿಂದ ಮಾತ್ರ ಅವರು ಹೇಗೆ ಎಂದು ಹೇಳಲು ಸಾದ್ಯ .ಬೆಟ್ಟದ ನಿಜವಾದ ಸೌಂದರ್ಯ ಅಥವಾ ನ್ಯೂನತೆ ಅದನ್ನು ಒಳ ಹೊಕ್ಕು ನೋಡಿದಾಗ ಮಾತ್ರವೇ ಗೊತ್ತಾಗುವಂತೆ ಯಾರನ್ನೇ ಆಗಲಿ ಒಮ್ಮೆ ನೋಡಿ ತೀರ್ಮಾನಕ್ಕೆ ಬರದೇ ಅಧ್ಯಯನದಿಂದ ಮಾತ್ರವೇ ಅವರ ಕುರಿತು ತೀರ್ಮಾನಿಸಬೇಕು. ಇದು ಕೇವಲ ವ್ಯಕ್ತಿಗಳ ಸ್ನೇಹ ವಿಚಾರಕ್ಕೆ ಅಷ್ಟೇ ಸೀಮಿತವಾಗಿರದೇ ನಾವು ಯೋಚಿಸದೇ ತೆಗೆದುಕೊಳ್ಳುವ ತೀರ್ಮಾನಕ್ಕೂ ಅನ್ವಯವಾಗುತ್ತದೆ.
2.ತಾಳಿದವನು ಬಾಳಿಯಾನು
ತಾಳುವಿಕೆಗಿಂತ ತಪವಿಲ್ಲ ಎಂದು ದಾಸರು ಹೇಳಿದ್ದಾರೆ. ಕೋಪವೆಂಬುದು ಅನರ್ಥ ಸಾಧನ .ಮನುಷ್ಯನಿಗೆ ತಾಳ್ಮೆ ಅತಿ ಪ್ರಧಾನವಾದುದು.ಎಂತಹ ಸಂದರ್ಭದಲ್ಲಿಯೂ ತಾಳ್ಮೆ ,ವಿವೇಕವನ್ನು ಕಳೆದುಕೊಳ್ಳಬಾರದು. ಜೀವನದಲ್ಲಿ ಏಳು ಬೀಳುಗಳು ಸಹಜ .ಸುಖ ದುಃಖಗಳು ಜೀವನದಲ್ಲಿ ಬರುತ್ತಿರುವಂತೆಯೇ ಹೊರಟು ಹೋಗುತ್ತಿರುತ್ತವೆ. ಸುಖ ಬಂದಾಗ ಹಿಗ್ಗದೇ ದುಃಖ ಬಂದಾಗ ಕುಗ್ಗದೇ ಎರಡನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಬೇಕು . ತಾಳ್ಮೆಗೆಟ್ಟು ತೆಗೆದುಕೊಳ್ಳುವ ಆತುರದ ನಿರ್ಧಾರವು ಭವಿಷ್ಯಕ್ಕೇ ಮಾರಕವಾಗಬಲ್ಲುದು. ದಾಸರು ಹೇಳುವಂತೆ ''ಈಸಬೇಕು ,ಇದ್ದು ಜಯಿಸಬೇಕು''ಪ್ರವಾಹ ಎದುರಾದರೂ ಈಜಿ ಆಚೆಯ ದಡವನ್ನು ಸೇರುವ ಮನೋಭಾವ ಇರಬೇಕು. ಜೀವನದ ಕಷ್ಟಗಳನ್ನು ಎದುರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೇಡಿತನದ ನಿರ್ಧಾರಕ್ಕೆ ಬರಬಾರದು. ತಾಳ್ಮೆಯಿಂದ ಬಂದ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿ ಬದುಕನ್ನು ಗಟ್ಟಿಗಳಿಸುತ್ತ ಮುಂದೆ ಸಾಗಬೇಕು.
ರಿಂದ,
ನಿರ್ವಾಹಕ

(ಒಗಟು ಗಾದೆಗಳ ಪುಟ)

ಗಾದೆಗಳು ಮತ್ತು ಅದರ ಸಾರಾಂಶ-5

1.ಕೈ ಕೆಸರಾದರೆ ಬಾಯಿ ಮೊಸರು
ಈ ಗಾದೆಯ ಮಾತಿನ ಅರ್ಥವೆಂದರೆ ಕಷ್ಟ ಪಟ್ಟರೆ ಸುಖ ಎಂಬುದನ್ನು ಸೂಚಿಸುತ್ತದೆ. ಕನಕದಾಸರು ''ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ '' ಪ್ರತಿಯೊಬ್ಬರೂ ಜೀವನೋಪಾಯಕ್ಕಾಗಿ ಒಂದೊಂದು ಕೆಲಸವನ್ನು ಅವಲಂಬಿಸಬೇಕಾಗುತ್ತದೆ. ಉಳುವ ಕೆಲಸವನ್ನು ರೈತರು, ನೆಯ್ಯುವ ಕಾರ್ಯವನ್ನು ನೇಕಾರರು ಹೀಗೆ ಪ್ರತಿಯೊಬ್ಬರು ತಮ್ಮ ತಮ್ಮ ಜೀವನ ನಿರ್ವಹಣೆಗೆ ಒಂದೊಂದು ಕೆಲಸವನ್ನು ಮಾಡುವಾಗ ಆ ಕೆಲಸದಲ್ಲಿ ಪ್ರತಿಫಲ ಇರುವ ಹಾಗೆಯೇ ಸಾಕಷ್ಟು ಕಷ್ಟ ನಷ್ಟಗಳೂ ಇರುತ್ತವೆ. ಆದರೆ ಕಷ್ಟಗಳು ಬರುವವೆಂದು ಕೆಲಸ ಮಾಡದೇ ಬದುಕಲಾಗದು. ಕೈ ಕೆಸರಾಗುವುದೆಂದು ರೈತ ಬೆಳೆಯನ್ನು ಬೆಳೆಯದಿರಲಾದೀತೇ ? ಬೆಳೆ ಇಲ್ಲದೇ ಊಟ ಮಾಡುವುದು ಹೇಗೆ ? ರೈತ ಕೈ ಕೆಸರನ್ನು ಗಮನಿಸದೇ ಮುಂದೆ ಸಿಗುವ ಪ್ರತಿಫಲದ ನಿರೀಕ್ಷೆಯು ಅವನನ್ನು ಕಷ್ಟ ಪಡಲು ಪ್ರೇರೇಪಿಸುತ್ತದೆ. ಬಸವಣ್ಣನವರು ಹೇಳುವಂತೆ ಕಾಯಕವೇ ಕೈಲಾಸವಾಗಿದೆ. ಪರಿಶ್ರಮದಿಂದ ಮಾತ್ರವೇ ವಿದ್ಯೆ ಎಂದು ಸಂತ ಕಬೀರದಾಸರು ಹೇಳಿದ್ದಾರೆ. ದುಡಿತವೇ ದುಡ್ಡಿನ ತಾಯಿ ಆದ್ದರಿಂದ ಪ್ರತಿಯೊಬ್ಬರೂ ಕಷ್ಟಪಟ್ಟು ದುಡಿಯಬೇಕು .ಉದ್ಯೋಗಿಯಾದರೆ ಮಾತ್ರ ಸಂಪತ್ತು ದೊರೆಯಲು ಸಾಧ್ಯ . ಆದ್ದರಿಂದ ಪ್ರತಿಯೊಬ್ಬರೂ ತಮ್ಮ ತಮ್ಮ ಕಾರ್ಯವನ್ನು ನಿಷ್ಠೆಯಿಂದ ಮಾಡಿದರೆ ಫಲ ದೊರೆಯಲು ಸಾಧ್ಯ.
2.ತುಂಬಿದ ಕೊಡ ತುಳುಕುವುದಿಲ್ಲ
ಕೊಡ ತುಂಬಿದ್ದರೆ ಸಾಧಾರಣಕ್ಕೆ ತುಳುಕುವ ಕಾರಣವಿಲ್ಲ . ಅರ್ಧಮರ್ಧ ಇರುವಾಗ ನಾವು ಸಹಜವಾಗಿ ಎತ್ತಿದರೆ ನೀರು ಮೇಲೆ ಚಿಮ್ಮಿ ನಮ್ಮ ಮುಖಕ್ಕೆ ಸಿಂಪಡಿಸಿದಂತಾಗುವುದು. ಈ ಗಾದೆಯನ್ನು ಜ್ಞಾನಿಗೂ ಅರೆಬರೆ ತಿಳಿದವನಿಗೂ ಇರುವ ವ್ಯತ್ಯಾಸ ತಿಳಿಸಲು ಬಳಸುತ್ತಾರೆ.ನಿಜವಾದ ಜ್ಞಾನಿಯಾದವನು ತನ್ನ ಜ್ಞಾನ ,ಹೆಸರು ,ಗೌರವವನ್ನು ತಾನೇ ಪ್ರಚಾರ ಮಾಡಿಕೊಳ್ಳಲು ಹೋಗುವುದಿಲ್ಲ . ಆದರೆ ಅರೆಬರೆ ಕಲಿತ ವ್ಯಕ್ತಿಗಳು ತಮ್ಮನ್ನು ಮಾಹಾ ಜ್ಞಾನಿಗಳು .ತಾನೇ ಸರ್ವ ಶ್ರೇಷ್ಠ ಎಂಬಂತೆ ಸಮಾಜದಲ್ಲಿ ವರ್ತಿಸುತ್ತಾರೆ. ರಾಮಕೃಷ್ಣ ಪರಹಂಸರಂತವರು ಆಲ್ಬರ್ಟ್ ಐನ್ ಸ್ಟೈನ್ ನಂತಹ ಮಹಾನ್ ವ್ಯಕ್ತಿಗಳಿಗೆ ತಮ್ಮನ್ನು ಪ್ರಚಾರಕ್ಕೆ ಒಳಪಡಿಸಿಕೊಳ್ಳಬೇಕಾದ ಆವಶ್ಯಕತೆಯೇ ಇರುವುದಿಲ್ಲ.ಸಂದರ್ಭ ಬಂದಾಗಲೆಲ್ಲ ಮಹಾತ್ಮರ ವ್ಯಕ್ತಿತ್ವ ತಾನೇ ತಾನಾಗಿ ವ್ಯಕ್ತವಾಗುತ್ತದೆ. ಅಲ್ಪವಿದ್ಯಾ ಮಹಾಗರ್ವಿಗಳು ಅರ್ಧ ತುಂಬಿದ ಕೊಡದ ಹಾಗೆ ಕೊಡವನ್ನೆತ್ತಿದ್ದರೆ ನೀರು ತುಳುಕುವಂತೆ ಆವಶ್ಯಕತೆ ಇಲ್ಲದಿದ್ದರೂ ತಮ್ಮನ್ನು ಪ್ರಚಾರಕ್ಕೆ ಒಳಪಡಿಸಿಕೊಳ್ಳುತ್ತಾರೆ.ಯಾವುದೇ ವಿಷಯದಲ್ಲಿ ಪೂರ್ಣ ಜ್ಞಾನ ಪಡೆಯಲು ಪ್ರಯತ್ನಿಸಬೇಕು .ಅರ್ಧ ಬೆಂದ ಇಟ್ಟಿಗೆಯಾಗಬಾರದು .ಸ್ವ ಪ್ರದರ್ಶನ ಮಾಡಿಕೊಳ್ಳುವುದು ,ಆತ್ಮ ಪ್ರಶಂಸೆ ಮಾಡಿಕೊಳ್ಳುವುದು ದೊಡ್ಡಸ್ತಿಕೆಯ ಲಕ್ಷಣವಲ್ಲ. ಪೂರ್ಣ ವಿಚಾರವನ್ನು ಅರಿತವರು ಪ್ರಚಾರಪ್ರಿಯರಾಗಿರುವುದಿಲ್ಲ.ಸಂಯುಮ ವುಳ್ಳವರಾಗಿರುತ್ತಾರೆ. ಆದರ್ಶಪ್ರಾಯರಾಗಿರುತ್ತಾರೆ.ಅರ್ಧ ತಿಳಿದುಕೊಂಡವರ ಮಾತಿನಲ್ಲಿ,ನಡೆನುಡಿಗಳಲ್ಲಿ ಸಂಯುಮವಿರಲಾರದು. ಈ ಗಾದೆ ಮಾತಿನಲ್ಲಿ ಜ್ಞಾನಿಗಳನ್ನು, ತುಂಬಿದ ಕೊಡಕ್ಕೂ ಅರ್ಧ ತಿಳಿದು ಪ್ರಚಾರ ಪ್ರಿಯರಾಗಿರುವವರನ್ನು ಅರ್ಧ ತುಂಬಿದ ಕೊಡಕ್ಕೂ ಹೋಲಿಸಲಾಗಿದೆ.
3.ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?
ಗಿಡ ಚಿಕ್ಕದಾಗಿರುವಾಗ ಅದನ್ನು ಬಾಗಿಸಬಹುದು .ಅದೇ ಅದು ಬೆಳೆದು ಗಟ್ಟಿಯಾಗಿ ಮರವಾದ ಮೇಲೆ ಅದನ್ನು ಬಗ್ಗಿಸಲು ಸಾಧ್ಯವಾಗುವುದಿಲ್ಲ.ಮನೆಯ ಮುಂದೆ ಅಲಂಕಾರಿಕವಾಗಿ ಬೆಳೆಸಬೇಕಾದ ಗಿಡವನ್ನು ಅದು ಚಿಕ್ಕದಿರುವಾಗಲೇ ನಮಗೆ ಬೇಕಾದ ಆಕಾರಕ್ಕೆ ಬಗ್ಗಿಸಬೇಕು .ಅದು ದೊಡ್ಡದಾದ ಮೇಲೆ ನಮಗೆ ಬೇಕಾದ ಆಕಾರಕ್ಕೆ ತರಲು ಆಗುವುದಿಲ್ಲ.ಹಾಗೆಯೇ ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಬೇಕಾದ ಮಕ್ಕಳಿಗೆ ಚಿಕ್ಕವರಿರುವಾಗಲೇ ಜೀವನ ಮೌಲ್ಯಗಳನ್ನು ರೂಢಿಸುವ ಕಾರ್ಯವಾಗಬೇಕು. ಅವರಿಗೆ ಚಿಕ್ಕವರಿರುವಾಗಲೇ ಬುದ್ಧಿ ಹೇಳಬೇಕು ,ತಪ್ಪು ಮಾಡಿದರೆ ತಿದ್ದಿ ತಿಳುವಳಿಕೆ ನೀಡಬೇಕು. ಆದರೆ ಅವರು ಚಿಕ್ಕವರು ಎನ್ನುವ ಕಾರಣಕ್ಕೆ ಅವರ ತಪ್ಪುಗಳನ್ನು ತಿದ್ದದೇ ಹಾಗೆ ಬೆಳೆಯಲು ಬಿಟ್ಟರೆ ಮುಂದೆ ದೊಡ್ಡವರಾದಂತೆ ಅದೇ ತಪ್ಪುಗಳೇ ಅವರ ಪಾಲಿಗೆ ಒಪ್ಪುಗಳಾಗಿ ಮಾರ್ಪಟ್ಟು ಮುಂದೆ ತಿದ್ದ ಹೊರಟರೂ ಪ್ರಯೋಜನವಾಗುವುದಿಲ್ಲ. ಮನೆಯಲ್ಲಿ ಮಕ್ಕಳನ್ನು ಎಷ್ಟು ಪ್ರೀತಿಸಿದರೂ ಮುದ್ದಿಸಿದರೂ ಸರಿ ತಪ್ಪುಗಳ ಪ್ರಶ್ನೆ ಬಂದಾಗ ಅವರಿಗೆ ಅವರ ತಪ್ಪುಗಳನ್ನು ಮನಗಾಣಿಸಿ ಅವರನ್ನು ತಿದ್ದುವುದು ದೊಡ್ಡವರ ಆದ್ಯ ಕರ್ತವ್ಯವಾಗಿದೆ.ಮಗುವಿನ ತಪ್ಪುನಡುವಳಿಕೆಯನ್ನು , ಕೆಟ್ಟ ಸಹವಾಸಗಳನ್ನು ಬಾಲ್ಯದಿಂದಲೇ ತಿಳಿಸಿ ಸರಿಪಡಿಸಬೇಕು .ಇಲ್ಲವಾದರೆ ದೊಡ್ಡವರಾದ ಮೇಲೆ ಅವರು ಸಮಾಜದಲ್ಲಿ ಯಾವುದೇ ಪ್ರಯೋಜನಕ್ಕೆ ಬಾರದವರಾಗಿ ಬಾಳಬೇಕಾಗುತ್ತದೆ ಆಮೇಲೆ ಅವರನ್ನು ಸರಿ ಪಡಿಸಲು ಸಾದ್ಯವಾಗದೇ ಪಶ್ಚಾತ್ತಾಪ ಪಡುವ ಕಷ್ಟ ದೊಡ್ಡವರದಾಗುತ್ತದೆ ಎನ್ನುವುದು ಮೇಲಿನ ಗಾದೆ ಮಾತಿನ ಅರ್ಥವಾಗಿದೆ.
ರಿಂದ,
ನಿರ್ವಾಹಕ

(ಒಗಟು ಗಾದೆಗಳ ಪುಟ)

ಗಾದೆಗಳು ಮತ್ತು ಅದರ ಸಾರಾಂಶ-4

1.ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ
ಬಲಶಾಲಿಗಳು ಶ್ರೀಮಂತರ ಹುಡುಗಾಟ ದುರ್ಬಲರಿಗೆ, ಕೆಳವರ್ಗದವರಿಗೆ ಬಡವರಿಗೆ ಸಂಕಟವನ್ನು ಉಂಟುಮಾಡುತ್ತದೆ ಎಂಬ ಅರ್ಥವನ್ನು ಈ ಗಾದೆ ನೀಡುತ್ತದೆ. ಇಲ್ಲಿ ಬೆಕ್ಕು ಹಾಗೂ ಇಲಿ ಎಂಬ ಪ್ರಾಣಿಗಳ ಹೆಸರನ್ನು ಬಳಸಿದ್ದರೂ, ಇವುಗಳ ಹಾಗೆ ವರ್ತಿಸುವ ಮನುಷ್ಯರಿಗೆ ಅನ್ವಯಿಸುತ್ತದೆ. ಬೆಕ್ಕು ಇಲಿಯನ್ನು ಬೇಟೆಯಾಡಿದ ತಕ್ಷಣ ತಿನ್ನದೆ ಅದಕ್ಕೆ ಹಿಂಸೆ ಕೊಟ್ಟು ಚೆಲ್ಲಾಟವಾಡುತ್ತದೆ. ಅದೇ ರೀತಿಯಲ್ಲಿ ಕೆಲವು ಮನುಷ್ಯರಿಗೆ ಇದೆ ಬುದ್ದಿ ಇರುತ್ತದೆ. ಇವರು ಇತರರು ಕಷ್ಟಪಡುವುದನ್ನು ನೋಡಿ ಸಂತೋಷಪಡುತ್ತಾರೆ. ತಮಗೆ ಆಗದವರಿಗೆ ಏನಾದರೂ ಆಪತ್ತು ಸಂಭವಿಸಿದರೆ ಅದನ್ನು ಕಂಡು ಹಾಲು ಕುಡಿದಷ್ಟು ಸಂತೋಷವಾಗುತ್ತದೆ. ಹೀಗೆ ಅನೇಕರು ಇತರರಿಗೆ ಕಷ್ಟಕೊಟ್ಟು ಚೆಲ್ಲಾಟವಾಡುತ್ತಾರೆ.
2.ಹುಟ್ಟುವಾಗ ಅಣ್ಣತಮ್ಮಂದಿರು ಬೆಳೆಯುವಾಗ ದಾಯಾದಿಗಳು
ಈ ಗಾದೆಯಲ್ಲಿ ಅಣ್ಣ - ತಮ್ಮಂದಿರು ಬೆಳೆಯುವಾಗ ಹೇಗೆ ಬದಲಾಗುತ್ತಾರೆ ಎಂಬ ವಿಷಯವನ್ನು ತಿಳಿಸುತ್ತದೆ. ಮದುವೆಯಾಗುವುದಕ್ಕೆ ಮಂಚೆ ಅಣ್ಣ - ತಮ್ಮಂದಿರು ಅನ್ಯೋನ್ಯವಾಗಿಯೇ ಇರುತ್ತಾರೆ. ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುತ್ತಿರುತ್ತಾರೆ. ಆದರೆ ಯಾವಾಗ ಅಣ್ಣ - ತಮ್ಮಂದಿರು ಮದವೆಯಾಗುತ್ತಾರೋ, ಆಗ ಅಣ್ಣ - ತಮ್ಮಂದಿರಲ್ಲಿ ವಿರಸ ಪ್ರಾರಂಭವಾಗುತ್ತದೆ. ಅವರಲ್ಲಿ ಮನಸ್ತಾಪಗಳಾಗಿ, ಜಗಳಗಳೂ ನಡೆಯುವುದುಂಟು. ಹಾಗಾಗಿ ಮದುವೆಯಾದ ನಂತರ ಅಣ್ಣ-ತಮ್ಮಂದಿರು ಬೇರೆ ಬೇರೆ ಮನೆಗಳಲ್ಲಿ ಸಂಸಾರ ಹೂಡುವುದು ಸರ್ವೇ ಸಾಮಾನ್ಯವಾಗಿದೆ. 'ನಾಲ್ಕು ಕ್ರಾಪುಗಳು ಒಟ್ಟಿಗೆ ಇರಬಹುದು, ಎರಡು ಜಡೆಗಳು ಒಟ್ಟಿಗೆ ಇರಲಾರವು' ಎಂಬ ಮತ್ತೊಂದು ಗಾದೆ ಹುಟ್ಟಿಕೊಂಡಿದೆ. ಚಿಕ್ಕಪ್ಪ - ದೊಡ್ಡಪ್ಪಂದಿರ ಮಕ್ಕಳನ್ನು ದಾಯಾದಿಗಳು ಅನ್ನುತ್ತೇವೆ. ಬೆಳೆಯುತ್ತಾ ಹೋದಂತೆ ಒಂದೇ ತಾಯಿಯ ಮಕ್ಕಳಲ್ಲೂ ಈ ಗುಣ ಬರುತ್ತದೆಂಬುದು ಈ ಗಾದೆಯ ಸಾರಾಂಶ.
3.ಹಾಸಿಗೆ ಇದ್ದಷ್ಟು ಕಾಲು ಚಾಚು
ಮೇಲಿನ ಗಾದೆ ಮಾತು ಜೀವನದ ಇತಿಮಿತಿಯನ್ನು ಸೂಚಿಸುತ್ತದೆ. ಹಾಸಿಗೆಯ ಅಳತೆಗೆ ತಕ್ಕಂತೆ ಕಾಲು ಚಾಚಿ ಮಲಗಬೇಕು. ಇಲ್ಲವಾದರೆ ಕಾಲು ಹಾಸಿಗೆಯಿಂದ ಆಚೆ ಬಂದು ನೆಲ ಮುಟ್ಟಿ ಶೀತ ಬಾಧೆ ಬಂದೀತು . ಹಾಗಾಗಿ ಹಾಸಿಗೆ ಅಷ್ಟು ಉದ್ದವಿಲ್ಲದಿದ್ದರೆ ,ಮೊಟಕಾಗಿದ್ದರೆ ಕಾಲನ್ನು ಮಡಚಿಕೊಳ್ಳುತ್ತೇವೆ. ಹಾಗೆಯೇ ನಮ್ಮ ಮಿತಿಯನ್ನು ಅರಿತು ಬಾಳಬೇಕು .ಯಾವುದೇ ಕೆಲಸಕ್ಕೆ ಕೈ ಹಾಕಿದರೂ ನಮ್ಮ ಶಕ್ತಿ,ಸಾಮರ್ಥ್ಯ ,ಸೌಕರ್ಯಗಳನ್ನು ಗಮನಿಸಬೇಕು. ಅದಕ್ಕೆ ತಕ್ಕಂತೆ ಖರ್ಚು ಮಾಡಬೇಕು. ಸಾಲ ಮಾಡಿ ತುಪ್ಪ ತಿನ್ನುವ ಜಾಯಮಾನ ನಮ್ಮದಾಗಬಾರದು. ನಮ್ಮ ಆದಾಯಕ್ಕೆ ತಕ್ಕ ಹಾಗೆ ಖರ್ಚು ಮಾಡಬೇಕು. ಆದಾಯ ಕಡಿಮೆ ಖರ್ಚು ಅತಿಯಾದರೆ ಜೀವನದಲ್ಲಿ ನಾವೇ ಸಂಕಟಪಡಬೇಕಾಗುತ್ತದೆ. ದುಃಖ ,ಗೊಂದಲ ನಮ್ಮನ್ನು ಅವಲಂಬಿಸಿರುವವರಿಗೂ ಸಮಸ್ಯೆಗಳುಂಟಾಗುತ್ತವೆ. ಬುದ್ಧ ಹೇಳುವಂತೆ ಆಸೆಯೇ ದುಃಖಕ್ಕೆ ಮೂಲ; ಆಸೆಯ ನಾಶವೇ ಸಂತೋಷದ ಮೂಲವಾಗಿದೆ. ಆದ್ದರಿಂದ ಇರುವುದರಲ್ಲಿ ತೃಪ್ತಿಕರವಾದ ,ಆರೋಗ್ಯಕರವಾದ ಜೀವನವನ್ನು ನಡೆಸಬೇಕು.ಮಿತಿಯನ್ನು ಅರಿತು ಬಾಳು ಎಂಬುದು ಮೇಲಿನ ಗಾದೆ ಮಾತಿನ ಸಂದೇಶವಾಗಿದೆ.
ರಿಂದ,
ನಿರ್ವಾಹಕ

(ಒಗಟು ಗಾದೆಗಳ ಪುಟ)

ಗಾದೆಗಳು ಮತ್ತು ಅದರ ಸಾರಾಂಶ-3

1.ಕಳ್ಳನಿಗೊಂದು ಪಿಳ್ಳೆ ನೆವ ಮಳ್ಳಿಗೊಂದು ಮಗುವಿನ ನೆವ
ಈ ಗಾದೆಯಲ್ಲಿ ಕಳ್ಳನು ಏನಾದರೂ ಒಂದು ಕಾರಣ ಹೇಳಿ ಕಳ್ಳತನ ನಡೆದ ಜಾಗದಿಂದ ಪರಾರಿಯಾಗುತ್ತಾನೆ. ಅದೇ ರೀತಿ ಹೆಂಗಸೊಬ್ಬಳು ತನ್ನ ಮಗು ಅಳುತ್ತಿದೆ ಎಂದು ಕಾರಣ ಹೇಳಿ ಕೆಲಸದಿಂದ ತಪ್ಪಿಸಿಕೊಂಡು ಹೋಗುತ್ತಾಳೆ. ಅವಳಿಗೆ ಕೆಲಸ ಮಾಡುವ ಮನಸ್ಸಿರುವುದಿಲ್ಲ ಅದಕೊಂದು ನೆಪಬೇಕು. ಆ ನೆಪ ತನ್ನ ಮಗುವಿನ ರೂಪದಲ್ಲಿ ಸಿಗುತ್ತದೆ. ಕೆಲಸ ಮಡದ ಸೋಮಾರಿಗಳನ್ನು ಕುರಿತು ಈ ಗಾದೆ ಹೇಳಲಾಗಿದೆ. ಸೋಮಾರಿಗಳಿಗೆ ಕೆಲಸ ಮಾಡದಿರುವುದಕ್ಕೆ ನೂರಾರು ಕಾರಣಗಳು ಸಿಗುತ್ತವೆ. ಅಂಥ ಕಾರಣಗಳನ್ನು ಅವರು ಸೃಷ್ಟಿಸಿಕೊಳ್ಳುತ್ತಾರೆ.
2.ಅತ್ತೆ ಮೇಲಿನ ಸಿಟ್ಟು ಕೊತ್ತಿ ಮೇಲೆ
ಈ ಗಾದೆಯಲ್ಲಿ ಸೊಸೆಯ ಅಸಹಾಯಕತೆಯನ್ನು ಹೇಳಲಾಗಿದೆ. ಅತ್ತೆಯ ಕೆಲವು ನಡವಳಿಕೆಗಳಿಂದ ಸೊಸೆಗೆ ಅತ್ತೆಯ ಮೇಲೆ ಸಿಟ್ಟು ಬರುತ್ತದೆ. ಆದರೆ ಮನೆಗೆ ಯಜಮಾನಿಯಾದ ಅತ್ತೆಯನ್ನು ಬಯ್ಯುವಂತಿಲ್ಲ. ಆದ್ದರಿಂದ ಅವಳು ಕಂಡುಕೊಂಡ ಉಪಾಯವೆಂದರೆ, ಮನೆಯಲ್ಲಿ ಸಾಕಿದ ಬೆಕ್ಕಿಗೆ ಒಂದೇಟು ಹಾಕುತ್ತಾಳೆ. ಆಗ ಅವಳಿಗೆ ಸಮಧಾನವಾಗುತ್ತದೆ. ಈ ರೀತಿ ಅವಳು ಅತ್ತೆಯ ಮೇಲಿನ ಸಿಟ್ಟನ್ನು ಬೆಕ್ಕಿಗೆ ಹೊಡೆಯುವುದರ ಮೂಲಕ ತೀರಿಸಿಕೊಳ್ಳುತ್ತಾಳೆ.
3.ಕೋಟಿ ವಿದ್ಯೆಗಳಿಗಿಂತ ಮೇಟಿ ವಿದ್ಯೆ ಮೇಲು
ಈ ಗಾದೆಯಲ್ಲಿ ವ್ಯವಸಾಯದ ಪ್ರಾಮುಖ್ಯತೆಯನ್ನು ತಿಳಿಸಿದೆ. ಮೇಟಿ ವಿದ್ಯೆ ಅಂದರೆ ಬೇಸಾಯ ಮನುಷ್ಯನ ಜೀವನಾಧಾರವಾದ ಕಸುಬಾಗಿದೆ. ರೈತ ಬೆಳೆಯದಿದ್ದರೆ ಸಮಾಜದ ಇತರ ಕಸುಬು ಮಾಡುವ ಜನರೂ ಉಪವಾಸ ಸಾಯಬೇಕಾಗುತ್ತದೆ. ದುಡ್ಡು ತಿನ್ನಲು ಬರುವುದಿಲ್ಲ. ದುಡ್ಡಿಗೆ ಕೊಳ್ಳುವ ಶಕ್ತಿ ಇರುವುದಧಾದರೂ ಕೊಳ್ಳಲು ಧಾನ್ಯವೇ ಇಲ್ಲದಿದ್ದರೆ ಗತಿಯೇನು? ಹಾಗಾಗಿಯೇ ಇಲ್ಲಿ ಬೇಸಾಯದ ಮಹತ್ವವನ್ನು ಒತ್ತಿ ಹೇಳಿದೆ. "ಮೇಟಿ ವಿದ್ಯೆ" ಇಲ್ಲಿರುವ ಮೇಟಿ ಎಂಬ ಪದದ ಅರ್ಥ ಹುಲ್ಲು ತುಳಿಸುವ ಕಣದಲ್ಲಿರುವ ಮೇಟಿ ಎಂದು. ಮೇಟಿ ಯನ್ನು ಕಣದ ಮಧ್ಯಭಾಗದಲ್ಲಿ ನೆಟ್ಟಿರುತ್ತಾರೆ. ಮೇಟಿಯ ಸುತ್ತಲೂ ಹಗ್ಗದಿಂದ ಕಟ್ಟಿರುವ ಎತ್ತುಗಳನ್ನು ತಿರಿಗಿಸುತ್ತಾರೆ. ಈ ರೀತಿ ಎತ್ತುಗಳ ಕಾಲ್ತುಳಿತಕ್ಕೆ ಸಿಕ್ಕಿದ ರಾಗಿ ತೆನೆಯಲ್ಲಿನ ರಾಗಿ ತೆನೆಯಿಂದ ಪ್ರತ್ಯೇಕಗೊಳ್ಳುತ್ತದೆ. ರಾಗಿ ತುಳಿಸುವ ಈ ದೃಶ್ಯವನ್ನು ರೈತರು ಸುಗ್ಗಿ ಕಾಲದಲ್ಲಿ ಕಣಗಳಲ್ಲಿ ಕೆಲಸ ಮಾಡುವಾಗ ಕಾಣಬಹುದು. ಹಾಗಾಗಿ ಮೇಟಿ ವಿದ್ಯೆ ಎಂದರೆ ಬೇಸಾಯ ಎಂದು ಅರ್ಥಮಾಡಿಕೊಳ್ಳಬೇಕು.
ರಿಂದ,
ನಿರ್ವಾಹಕ

(ಒಗಟು ಗಾದೆಗಳ ಪುಟ)

ಗಾದೆಗಳು ಮತ್ತು ಅದರ ಸಾರಾಂಶ-2

1.ಮಾಡಿದ್ದುಣ್ಣೋ ಮಹರಾಯ
ಈ ಗಾದೆಯು ತಾನು ಮಾಡಿದ ಕರ್ಮಗಳ ಫಲವನ್ನು ತಾನೇ ಅನುಭವಿಸಬೇಕು. ಬೇರೆ ಯಾರೂ ಅದರ ಫಲಗಳನ್ನು ಅನುಭವಿಸಲಾರರು ಎಂಬುದನ್ನು ಹೇಳುತ್ತದೆ. ಒಳ್ಳೆಯ ಕರ್ಮಗಳನ್ನು ಮಾಡಿದವರಿಗೆ ಒಳ್ಳೆಯ ಫಲಗಳು, ಕೆಟ್ಟ ಕರ್ಮಗಳನ್ನು ಮಾಡಿದದವರಿಗೆ ಕೆಟ್ಟ ಫಲಗಳು ಉಂಟಾಗುವುದು ಖಚಿತ ಎಂಬುದನ್ನು ಈ ಗಾದೆ ತಿಳಿಸಿ ಹೇಳುತ್ತದೆ. ಆದ್ದರಿಂದ ಜನರು ಯಾವುದೇ ಕೆಲಸ ಮಾಡಬೇಕಾದರೂ ಇದರ ಪರಿಣಾಮವೇನಾಗುತ್ತದೆ ಎಂದು ಯೋಚನೆ ಮಾಡಬೇಕು. ಮಾಡಿದ ಮೇಲೆ ಪಶ್ಚಾತ್ತಾಪ ಪಟ್ಟರೆ ಏನೂ ಪ್ರಯೋಜನವಿಲ್ಲ. ತಾನು ಮಾಡಿದ ಕರ್ಮಗಳ ಫಲವನ್ನು ತಾನು ಅನುಭವಿಸಿಯೇ ತೀರಬೇಕು. ಇದರಿಂದ ಯಾರೂ ತಪ್ಪಿಸಿಕೊಳ್ಳಲಾರರು ಎಂಬುದನ್ನು ಈ ಗಾದೆ ಒತ್ತಿ ಹೇಳುತ್ತದೆ.
2.ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ
ಈ ಗಾದೆಯು ದುರದೃಷ್ಟಶಾಲಿಗಳನ್ನು ಕುರಿತ ಗಾದೆಯಾಗಿದೆ. ಮಹಾಭಾರತದಲ್ಲಿ ಕುಂತಿಯ ಮಕ್ಕಳಾದ ಪಾಂಡವರು ಕಡೆಯವರೆಗೂ ಕಷ್ಟವನ್ನೇ ಅನುಭವಿಸುತ್ತಾರೆ. ಕಡೆಗೆ ರಾಜ್ಯ ಸಿಕ್ಕಿದ ಮೇಲೂ ಅವರು ಸುಖವಾಗಿದ್ದರೆಂದು ಹೇಳುವುದಕ್ಕಾಗುವುದಿಲ್ಲ. ಕಡೆಗೆ ಅವರು ಸ್ವರ್ಗರೋಹಣ ಪರ್ವದಲ್ಲಿ ರಾಜಕಾರಣದಿಂದ ಬೇಸತ್ತು ಸ್ವರ್ಗಾಭಿಮುಖವಾಗಿ ಹೊರಟು ಹೋಗುತ್ತಾರೆ. ಆದರೆ ಅನ್ಯಾಯಗಳನ್ನು ಮಾಡುತ್ತ ರಾಜ್ಯಭಾರ ಮಾಡುತ್ತಿದ್ದ ಕೌರವರಾದರೋ ಯುದ್ಧದಲ್ಲಿ ಹತರಾದರೂ ಕೂಡ ಸಾಯುವವರೆಗೂ ಸುಖವಾಗಿಯೇ ಬಾಳಿದರು. ಈ ಅರ್ಥದಲ್ಲಿ ಈ ಗಾದೆ ಪೌರಾಣಿಕ ಸನ್ನಿವೇಶವೊಂದನ್ನು ಲೌಕಿಕಕ್ಕೆ ಅನ್ವಯಿಸಿ ಸೊಗಸಾಗಿ ಹೇಳಲಾಗಿದೆ.
3.ಪಾಪಿ ಸಮುದ್ರ ಹೊಕ್ಕರೂ ಮೊಳಕಾಲುದ್ದ ನೀರು
ಈ ಗಾದೆ ಒಬ್ಬ ವ್ಯಕ್ತಿಯ ದುರದೃಷ್ಟವನ್ನು ಕುರಿತು ಹೇಳುತ್ತದೆ. ಒಬ್ಬ ವ್ಯಕ್ತಿ ಏನೇ ಕೆಲಸ ಕೈಗೊಂಡರೂ ಯಶಸ್ವಿಯಾಗದೆ ಪದೇ ಪದೇ ಸೋಲನ್ನನುಭವಿಸುತ್ತಾನೆ. ಅಂಥ ಸಂದರ್ಭದಲ್ಲಿ ಈ ಗಾದೆಯನ್ನು ಬಳಸುತ್ತಾರೆ. ಸಮುದ್ರ ಆಳವಾಗಿರುತ್ತದೆ. ಆದರೆ ದುರದೃಷ್ಟವಂತ ಅಲ್ಲಿಯೂ ಮುಳುಗುವುದಿಲ್ಲ. ಅಂದರೆ ಅವನಿಗೆ ಎಲ್ಲಿ ಹೋದರೂ ಸೋಲೇ ಕಾದಿರುತ್ತದೆ ಎನ್ನುವ ಅರ್ಥ. ಪಾಪಿ, ಸಮುದ್ರ, ಮೊಳಕಾಲು, ನೀರು ಈ ಪದಗಳ ಜೋಡಣೆ ಹಳ್ಳಿಗನ ಬುದ್ಧಿವಂತಿಕೆಗೆ ನಿದರ್ಶನ.
ರಿಂದ,
ನಿರ್ವಾಹಕ

(ಒಗಟು ಗಾದೆಗಳ ಪುಟ)

ಗಾದೆಗಳು ಮತ್ತು ಅದರ ಸಾರಾಂಶ-1

ಗಾದೆಗಳು ಜನಮಾನಸದಲ್ಲಿ ಸ್ಥಾಯಿಯಾಗಿ ನಿಂತ ಅನುಭವದ ನುಡಿಗಳು. ಅವು ಮನುಷ್ಯರ ನೂರಾರು ವರ್ಷಗಳ ಅನುಭವದ ಆಧಾರದಲ್ಲಿ ನಿರ್ಮಿತವಾದ ನುಡಿಗಟ್ಟುಗಳು. ಹಾಗಾಗಿ ಇವುಗಳಲ್ಲಿರುವ ಹೇಳಿಕೆಗಳು ಸತ್ಯವೆಂದೇ ಜನ ಪರಿಗಣಿಸುತ್ತಾರೆ.

1.ಚಿಂತೆಯೇ ಮುಪ್ಪು ಸಂತೋಷವೇ ಯೌವನ

ಕನ್ನಡ ಜನಪದ ಸಾಹಿತ್ಯದ ಬಹು ಮುಖ್ಯ ಪ್ರಕಾರಗಳ ಲೊಂದು. ಗಾದೆ ಎಂಬ ಪದ ಸಂಸ್ಕ್ರತದ ಗಾಥಾ ನೇರ ತದ್ಭವವಾಗಿರಬಹುದು. ಗಾದೆಗೆ ಸಂವಾದಿಯಾಗಿ ಸಾಮತಿ, ಸೂಕ್ತಿ, ಲೋಕೋಕ್ತಿ, ಸಾರೋಕ್ತಿ, ನಾಣ್ಣುಡಿ ಮುಂತಾದ ಪದಗಳು ಬಳಕೆಯಲ್ಲಿದ್ದರೂ ಗಾದೆ ಶಬ್ದವೇ ಹೆಚ್ಚು ಪ್ರಚಾರದಲ್ಲಿದೆ. ಚಿಂತೆಯು ಆಯುಷ್ಯವನ್ನು ತಿನ್ನುತ್ತದೆ ಎನ್ನುವ ಮಾತಿನಂತೆ ಮಾನಸಿಕ ಚಿಂತೆ ಮನುಷ್ಯರಿಗೆ ಅಕಾಲದ ಮುಪ್ಪನ್ನು ತರುತ್ತದೆ. ಚಿಂತೆಗೂ ಚಿತೆಗೂ ವ್ಯತ್ಯಾಸ ಸೊನ್ನೆ. ಆದರೆ ಚಿಂತೆ ಬದುಕಿದವರನ್ನು ಸುಟ್ಟರೆ, ಚಿತೆ ಜೀವ ಇಲ್ಲದ ವಸ್ತುವನ್ನು ಸುಡುತ್ತದೆ. ಚಿಂತೆಯು ನಮ್ಮ ಮನಸ್ಸಿನ ಸಂತೋಷವನ್ನು ಹಾಳುಮಾಡುತ್ತದೆ. ಮನುಷ್ಯನನ್ನು ನಿರುತ್ಸಾಹಿಯಾಗಿ ಮಾಡಿ, ದುಡಿಯುವ ಶಕ್ತಿ, ಚೈತನ್ಯವನ್ನು ಕುಗ್ಗಿಸುತ್ತದೆ. ಚಿಂತಿಸುತ್ತಾ ಹೋದರೆ ಅದು ನಮ್ಮ ಆಯುಷ್ಯವನ್ನು ತಿಂದು ಅಕಾಲ ವೃದ್ಧಾಪ್ಯವನ್ನುಂಟುಮಾಡಿ ಬದುಕನ್ನು ನಶ್ವರಗೊಳಿಸುತ್ತದೆ. ಆದ್ದರಿಂದ ಚಿಂತಿಸುವುದನ್ನು ಬಿಟ್ಟು ಬದುಕಿರುವಷ್ಷು ಕಾಲ ಸುಖ ಸಂತೋಷದಿಂದ ಜೀವನವನ್ನು ಕಳೆಯಬೇಕು. ಮನಸ್ಸಿನ ಸಂತೋಷ ವೃದ್ಧನಲ್ಲೂ ಯೌವನವನ್ನು ಮೂಡಿಸುತ್ತದೆ. ಶಕ್ತಿಯನ್ನು ತುಂಬುತ್ತದೆ. ಯಾರ ಬದುಕಿನಲ್ಲಿ ಸಂತೋಷ ಇರುವುದೋ ಅವರು ಆರೋಗ್ಯದಿಂದ ಬಾಳುತ್ತಾರೆ. ಬದುಕಬೇಕು, ಸಾಧಿಸಬೇಕು, ಗೆಲ್ಲಬೇಕು ಎಂಬ ಛಲವನ್ನು ಹೊಂದಿರುತ್ತಾರೆ. ಆದ್ದರಿಂದ ನಾವು ನಗುನಗುತಾ ಸಂತೋಷ ದಿಂದ ಬಾಳಬೇಕು. ಚಿಂತೆಯಿಂದ ದೂರ ಇರಬೇಕು. ಸಂತೋಷವು ಯೌವನಾವಸ್ಥೆಯ ಸಾಮರ್ಥ್ಯವನ್ನು ತಂದು ಕೊಡುತ್ತದೆ.

2.ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ

ಉಪ್ಪಿಲ್ಲದಿದ್ದರೆ ಯಾವುದೇ ಊಟವು ರುಚಿಸದು. ಉಪ್ಪು ಎಲ್ಲಾ ಪಾಕ ವೈವಿಧ್ಯಗಳಿಗೂ ಪ್ರಧಾನ. ಅದೇ ರೀತಿ ತಾಯಿಯೂ ಕೂಡ. ಉಪ್ಪಿಲ್ಲದಿದ್ದರೆ ಊಟ ಹೇಗೆ ರುಚಿಸುವುದಿಲ್ಲವೋ, ಅದೇ ರೀತಿ ತಾಯಿ ಇರದಿದ್ದರೆ ಜೀವನವೇ ಅಂಧಕಾರವಗಿರುವುದು. ತಾಯಿ ನಮ್ಮನ್ನು ಕತ್ತಲಿನಿಂದ ಬೆಳಕಿನೆಡೆಗೆ ನಡೆಸುವ ಗುರುವಿದ್ದಂತೆ, ಅಡುಗೆಗೆ ಬಳಸುವ ಸಾಸಿವೆ, ಜೀರಿಗೆ ಮೆಂತ್ಯ, ಕೊತ್ತಂಬರಿ ಇತ್ಯಾದಿ ವಸ್ತುಗಳು ಬೇರೆ ಬೇರೆ ರುಚಿಯನ್ನು ಕೊಡುವುದಿಲ್ಲ. ಹಾಗೆಯೇ ಮನೆಯಲ್ಲಿ ತಂದೆ, ಅಣ್ಣ, ಅಕ್ಕ ತಂಗಿ, ಮಾವ ಮುಂತಾಗಿ ನಾನಾ ರೀತಿಯ ಬಂಧುಗಳಿದ್ದರೂ ತಾಯಿಯಷ್ಟು ಮಿಗಿಲಾದ ಬಂಧುಗಳಿಲ್ಲ. ಆದ್ದರಿಂದಲೇ ಜನಪದ ತ್ರಿಪದಿಯಲ್ಲಿ ಗರತಿ ಯಾರೂ ಆದರೂ ಹೆತ್ತ ತಾಯಂತೆ ಆದರೋ ಸಾವಿರ ಸೌದೆಒಲೆಯಲ್ಲಿ ಉರಿದಾರೂ ದೀವಿಗೆಯಂತೆ ಬೆಳಕುಂಟೆ. ಎಂದು ತಾಯಿ ಮಹಿಮೆಯನ್ನು ಹಾಡಿ ಹೊಗಳಿದ್ದಾರೆ. ಹೆತ್ತ ತಾಯಿ ದೇವರು ನಮಗೆ ನೀಡಿರುವ ಅಮೂಲ್ಯ ಆಸ್ತಿ. ಆ ಆಸ್ತಿಯನ್ನು ಜೋಪಾನವಾಗಿ ಕಾಪಾಡಬೇಕಾದದ್ದು, ನಮ್ಮೆಲ್ಲರ ಕರ್ತವ್ಯವಾಗಿದೆ. ಎಂಥಹ ಕಷ್ಟ ಬಂದರೂ ಇತರ ಬಂಧುಗಳು ನಮ್ಮಿಂದ ದೂರವಾದರೂ ನಮ್ಮನ್ನು ಅವಳು ಕೈಬಿಡಳು. ಆದ್ದರಿಂದ ತಾಯಿಗಿಂತ ಬಂಧುವಿಲ್ಲ. ಎಂಬ ಮಾತು ಅಕ್ಷರಶಃ ಅರ್ಥವತ್ತಾದುದಾಗಿದೆ.

3.ಕುಂಬಾರನಿಗೆ ವರ್ಷ ದೊಣ್ಣೆಗೆ ನಿಮಿಷ ಕುಂಬಾರ

ಒಂದು ಮಡಕೆ ಮಾಡಬೇಕಾದರೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾನೆ. ಕೆರೆಯಿಂದ ಜೇಡಿಮಣ್ಣು ತಂದು ಅದನ್ನು ಹದಮಾಡಿ, ತಟ್ಟಿ, ಮಡಕೆಯನ್ನು ಮಾಡಿ, ಅದನ್ನು ಒಣಗಿಸಿ, ಬೇಯಿಸಿ ನಂತರ ಮಾರಾಟ ಮಾಡುತ್ತಾನೆ. ಆದರೆ ಒಬ್ಬ ವ್ಯಕ್ತಿ ಒಂದೇ ನಿಮಿಷದಲ್ಲಿ ಒಂದು ದೊಣ್ಣೆಯಿಂದ ಮಡಕೆಗಳನ್ನು ಒಡೆದು ಹಾಕಬಹುದು. ಅಂದರೆ ಯಾವುದೇ ವಸ್ತುವನ್ನು ಸೃಷ್ಟಿ ಮಾಡುವುದು ಕಷ್ಟ ಆದರೆ ಅದನ್ನು ನಾಶ ಮಾಡುವುದು ಸುಲಭ. ಅದೇ ರೀತಿ ಒಂದು ಕಾರ್ಯವನ್ನು ಮಾಡಿಮುಗಿಸುವುದಕ್ಕೆ ಬಹಳ ಸಮಯ ಬೇಕಾಗುತ್ತದೆ. ಆದರೆ ಆ ಕಾರ್ಯವನ್ನು ಕೆಡಿಸುವುದಕ್ಕೆ ಹೆಚ್ಚು ಸಮಯ ಬೇಕಾಗುವುದಿಲ್ಲ. ಈ ಅರ್ಥದಲ್ಲಿ ಈ ಗಾದೆ ಬಳಕೆಯಲ್ಲಿದೆ.

ರಿಂದ,
ನಿರ್ವಾಹಕ
(ಒಗಟು ಗಾದೆಗಳ ಪುಟ)

ಗಾದೆಗಳು ಮತ್ತು ಅದರ ಸಾರಾಂಶ-11

1.ಹೆಣ್ಣು ಸಂಸಾರದ ಕಣ್ಣು ಈ ಗಾದೆಯಲ್ಲಿ ಸಂಸಾರದಲ್ಲಿ ಹೆಣ್ಣಿನ ಮಹತ್ವವನ್ನು ಹೇಳಿದೆ. ಹೆಣ್ಣಿಲ್ಲದ ಮೇಲೆ ಅದು ಸಂಸಾರವೇ ಅಲ್ಲ. ಮನುಷ್ಯನ ದೇಹಕ್ಕೆ ಕಣ್ಣು ಎಷ್ಟು ಮುಖ್...

">
">